72ನೇ ಗಣರಾಜ್ಯೋತ್ಸವ. 72nd republic day 2021
2021ರ ಜನವರಿ 26 ರಂದು ಭಾರತದಲ್ಲಿ ವರ್ಷದ ಮೊದಲ ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ನವದೆಹಲಿಯ ರಾಜಪಥದಲ್ಲಿ ಸೇನಾ ಪಥಸಂಚಲನ, ಸ್ತಬ್ಧ ಚಿತ್ರಗಳ ಪ್ರದರ್ಶನ, ಯುದ್ಧ ವಿಮಾನಗಳ ಸಾಹಸವುಳ್ಳ ಕಾರ್ಯಕ್ರಮಗಳು 72ನೇ ಗಣರಾಜ್ಯೋತ್ಸವದ. ದಿನದಂದು ಕೋವಿಡ್-19ರ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರದೊಂದಿಗೆ ಜರುಗಿದವು.
2021ರ ಜನವರಿ 26ರ ಗಣರಾಜ್ಯೋತ್ಸವ ದಿನ
ಭಾರತದ ರಾಷ್ಟ್ರಪತಿಗಳು ನವದೆಹಲಿಯ ರಾಜಪಥದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದು ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಗಳನ್ನು ಕೇಂದ್ರ ರಕ್ಷಣಾ ಸಚಿವಾಲಯ ವತಿಯಿಂದ ಆಯೋಜಿಸಲಾಗಿತ್ತು. ಭಾರತದ ಪ್ರಮುಖ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೆ, 9 ಕೇಂದ್ರ ಸಚಿವಾಲಯಗಳ ಟ್ಯಾಬ್ ಮತ್ತು ರಕ್ಷಣಾ ಘಟಕದಿಂದ 6 ಸೇರಿ ಒಟ್ಟು 32 ಟ್ಯಾಬ್ಲೊಗಳು ಪ್ರದರ್ಶನ ಕಂಡವು. ದೇಶದ ಸೇನಾ ಸಾಮರ್ಥ್ಯ, ಸಾರ್ವಭೌಮತೆ, ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಯು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಅನಾವರಣಗೊಂಡಿತು. ಪಥಸಂಚಲನದಲ್ಲಿ ಬಾಂಗ್ಲಾದೇಶದ ಸಶಸ್ತ್ರಪಡೆಯ ತುಕಡಿಯು ಇತ್ತು.
ವಿದೇಶಿ ಮುಖ್ಯ ಅತಿಥಿಯಿಲ್ಲದೆ ನಡೆದ ಗಣರಾಜ್ಯೋತ್ಸವ ಸಮಾರಂಭ 55 ವರ್ಷದಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ಮುಖ್ಯ ಅತಿಥಿಯಿಲ್ಲದೆ ಕಾರ್ಯಕ್ರಮ ನೆರವೇರಿಸಲಾಯಿತು. ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ನಿಗದಿಯಾಗಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕೋವಿಡ್ ಹಿನ್ನಲೆಯಲ್ಲಿ ಭಾರತದ ಪ್ರವಾಸ ರದ್ದುಗೊಳಿಸಿದ್ದರು. ನಂತರ ಸುರಿನೇಂ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾ ಪ್ರಸಾದ್ ಸಂತೋಖಿ ರವರನ್ನು ಆಹ್ವಾನಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ ಯಾವುದೇ ವಿದೇಶಿ ಮುಖ್ಯ ಅತಿಥಿ ಇಲ್ಲದೇ ಗಣರಾಜ್ಯೋತ್ಸವ ಸಮಾರಂಭ ಜರುಗಿತು. 1966ರ ನಂತರ ಇದೇ ಮೊದಲ ಬಾರಿಗೆ ವಿದೇಶಿ ಮುಖ್ಯ ಅತಿಥಿಗಳಿಲ್ಲದೇ ಪರೇಡ್ ನಡೆಯಿತು. 1952, 1953 ಮತ್ತು 1966 [ರಲ್ಲೂ ಮುಖ್ಯ ಅತಿಥಿಗಳಿಲ್ಲದೇ ಪರೇಡ್ ನಡೆದಿತ್ತು.
ಭಾರತದ ಗಣರಾಜ್ಯೋತ್ಸವದ ವಿಶೇಷ ಅತಿಥಿಗಳಿಗೆ ಆಹ್ವಾನ
* ಭಾರತದಲ್ಲಿ 1950 ಜನವರಿ 26ರ ಮೊದಲ ಗಣರಾಜ್ಯೋತ್ಸವ ದಿನದ ಆಚರಣೆಯಿಂದಲೂ ವಿಶೇಷವಾಗಿ ವಿದೇಶಿ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಂಪ್ರದಾಯವಿದೆ. ಮೊದಲ ಗಣರಾಜ್ಯೋತ್ಸವಕ್ಕೆ ಇಂಡೋನೇಷಿಯಾ ಅಧ್ಯಕ್ಷ ಸುಕಾರ್ನೊ ಭಾಗವಹಿಸಿದ್ದರು.
* 1950 - 54ರವರೆಗೆ ಗಣರಾಜ್ಯೋತ್ಸವ ಆಚರಣೆಯು ಇರ್ವಿನ್ ಸ್ಟೇಡಿಯಂ, ಕೆಂಪುಕೋಟೆ, ರಾಮ್‌ಲೀಲಾ ಗೌಂಡ್ ಮುಂತಾದ ಕಡೆ ನಡೆಯುತ್ತಿತ್ತು. 1955ರ ನಂತರ ದೆಹಲಿಯ ರಾಜ ಪಥದಲ್ಲಿ ಆಚರಣೆಯು ಪ್ರಾರಂಭಗೊಂಡಿದೆ. ಈ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಮೊದಲ ಅತಿಥಿ ಪಾಕಿಸ್ತಾನದ ಮೊದಲ ನಾಯಕ ಗೌವರ್ನರ್ ಜನರಲ್ ಮಲ್ಲಿಕ್ ಗುಲಾಮ್ ಮೊಹಮದ್ ಆಗಿದ್ದರು.
* ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ ಪಾಕ್‌ನ ಕೊನೆಯ ಗಣ್ಯರು – 1965ರಲ್ಲಿ ಪಾಕಿಸ್ತಾನದ ಅಂದಿನ ಕೃಷಿ ಮತ್ತು ಆಹಾರ ಸಚಿವ ರಾಣಾ ಅಬ್ದುಲ್ ಹಮೀದ್.
ಗಣರಾಜ್ಯೋತ್ಸವ ಆಚರಣೆಯ ಹಿನ್ನಲೆ
1929ರಲ್ಲಿ ಜವಾಹರ್ ಲಾಲ್ ನೆಹರೂ ಅಧ್ಯಕ್ಷತೆಯಲ್ಲಿ ಲಾಹೋರ್‌ನಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ 1930ರ ಜನವರಿ 26ನ್ನು ಪೂರ್ಣ ಸ್ವರಾಜ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. 1949ರ ನವೆಂಬರ್ 26 ರಂದು ಸಂವಿಧಾನ ರಚನಾ ಸಭೆಯು ಸಂವಿಧಾನಕ್ಕೆ ಅನುಮೋದನೆ ನೀಡಿತ್ತು. ಆದರೆ ಪೂರ್ಣ ಸ್ವರಾಜ್ಯ ಘೋಷಣೆಯಾದ ಜನವರಿ 26ರ ನೆನಪಿಗಾಗಿ 1950ರ ಜನವರಿ 26ರಲ್ಲಿ ಭಾರತದ ಸಂವಿಧಾನವನ್ನು ಜಾರಿಗೊಳಿಸಲಾಯಿತು. ಇದೇ ದಿನ ಭಾರತದ ಮೊದಲ ರಾಷ್ಟ್ರಪತಿಯಾಗಿ ಡಾ|| ಬಾಬು ರಾಜೇಂದ್ರ ಪ್ರಸಾದ್ (ಸಂವಿಧಾನ ರಚನಾ ಸಭೆ ಅಧ್ಯಕ್ಷರು) ಅವರು ಅಧಿಕಾರ ವಹಿಸಿಕೊಂಡರು.
ಸಂವಿಧಾನ ದಿವಸ್ : ನವೆಂಬರ್ 26 (2015ರಿಂದ)
ಭಾರತದಲ್ಲಿ 2 ವರ್ಷ 11 ತಿಂಗಳು 18 ದಿವಸಗಳ ಪರಿಶ್ರಮದ ಫಲವಾಗಿ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಂವಿಧಾನ ಕರಡು ಸಮಿತಿ ಅಧ್ಯಕ್ಷತೆಯಲ್ಲಿ ಸಿದ್ಧವಾದ ಸಂವಿಧಾನವನ್ನು ಬಾಬು ರಾಜೇಂದ್ರ ಪ್ರಸಾದ್ ನೇತೃತ್ವದ ರಚನಾ ಸಭೆಯು 1949ರ ನವೆಂಬರ್ 26 ರಂದು ಅಂಗೀಕರಿಸಿದ ಹಿನ್ನೆಲೆಯಲ್ಲಿ ನವೆಂಬರ್ 26 ಅನ್ನು ಸಂವಿಧಾನ ದಿವಸವಾಗಿ 2015 ರಿಂದ ಆಚರಣೆ ಮಾಡಲಾಗುತ್ತಿದೆ.
ಅಯೋಧ್ಯೆ ರಾಮಮಂದಿರ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ
ಉತ್ತರ ಪ್ರದೇಶ ರಾಜ್ಯವು
ಗಣರಾಜ್ಯೋತ್ಸವ ದ ಪಥಸಂಚಲನದಲ್ಲಿ ಅಯೋಧ್ಯೆಯ ಪ್ರಾಚೀನ ಪರಂಪರೆಯನ್ನು ಬಿಂಬಿಸುವ “ಅಯೋಧ್ಯೆ: ಉತ್ತರ ಪ್ರದೇಶದ ಸಾಂಸ್ಕೃತಿಕ ಪರಂಪರೆ” (Ayodhya: The Cultural
Heritage Of Uttar Pradesh) ಎಂಬ ಹೆಸರಿನಲ್ಲಿ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಿತ್ತು( Replica Of Ram Temple-Ayodhya), ಈ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ದೊರೆತಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಮಾದರಿಯ ಮುಂದೆ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ರವರು ಕುಳಿತಿರುವ ಟ್ಯಾಬ್ ದೇಶದ ಜನತೆಯ ಗಮನವನ್ನು ಸೆಳೆದಿತ್ತು. ಸತತವಾಗಿ 2ನೇ ವರ್ಷ ಉತ್ತರ ಪ್ರದೇಶ ರಾಜ್ಯವು ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ದ್ವಿತೀಯ ಪ್ರಶಸ್ತಿ ಪಡೆದ ಟ್ಯಾಬ್ಲೆ - ತ್ರಿಪುರ (Tripura)
ಸಾಮಾಜಿಕ ಆರ್ಥಿಕ ವಲಯದಲ್ಲಿ ಪರಿಸರ ಸ್ನೇಹಿಯಾಗಿ ಆತ್ಮ ನಿರ್ಭರತೆ ಸಾಧಿಸುವ ಕುರಿತ (Eco-Friendly and Aatma Nirbhar)ತ್ರಿಪುರದ ಸ್ತಬ್ಧಚಿತ್ರಕ್ಕೆ 2ನೇ ಸ್ಥಾನ ದೊರೆತಿದೆ.
ತೃತೀಯ ಪ್ರಶಸ್ತಿಗೆ ಭಾಜನವಾದ ಟ್ಯಾಬ್ಲೆ - ಉತ್ತರಾಖಂಡ “Dev Bhoomi - The Land Of The Gods' ಹೆಸರಿನ ಸ್ತಬ್ಧಚಿತ್ರ ಪ್ರದರ್ಶಿಸಿದ ಉತ್ತರಾಖಂಡ ರಾಜ್ಯಕ್ಕೆ 2021ರ ಗಣರಾಜ್ಯೋತ್ಸವದ ಟ್ಯಾಬ್ಲೆ ಪ್ರದರ್ಶನದಲ್ಲಿ ಮೂರನೇ ಪ್ರಶಸ್ತಿ ದೊರೆತಿದೆ.
ಕರ್ನಾಟಕ ರಾಜ್ಯದ ಸ್ತಬ್ಧ ಚಿತ್ರ ವಿಜಯನಗರ ಸಾಮ್ರಾಜ್ಯದ ಗತವೈಭವ
ರಾಜ್ಯದ ಸ್ತಬ್ಧಚಿತ್ರವಾಗಿ ವಿಜಯನಗರ (City of Victory)
ಕರ್ನಾಟಕ ಸಾಮ್ರಾಜ್ಯದ ಗತವೈಭವ ಸಾರುವ ಸ್ತಬ್ಧ ಚಿತ್ರವು ಪಾಲ್ಗೊಂಡಿತ್ತು. ರಾಜ್ಯದ ವಾರ್ತಾ ಇಲಾಖೆಯು ಈ ಸ್ತಬ್ಧ ಚಿತ್ರವನ್ನು ತಯಾರಿಸಿತ್ತು, ವಿಜಯನಗರ ಸಾಮ್ರಾಜ್ಯದ ಗತವೈಭವ ಸ್ತಬ್ಧಚಿತ್ರದಲ್ಲಿ ಹನುಮಂತನ ಮಾತಂಗ ಪರ್ವತ, ಶ್ರೀಕೃಷ್ಣ ದೇವರಾಯನ ಪಟ್ಟಾಭಿಷೇಕ ಕಾರ್ಯಕ್ರಮ, ಹಂಪಿಯ ಹಜಾರ ರಾಮ ದೇಗುಲ ಮತ್ತು ಉಗ್ರ ನರಸಿಂಹನ ಆಕೃತಿ ಈ ಸ್ತಬ್ಧಚಿತ್ರದ ಪ್ರಮುಖ ಆಕರ್ಷಣೆಗಳಾಗಿದ್ದವು.
ಹಂಪಿಯ ಕಲ್ಲಿನ ರಥ, ವಿಜಯ ವಿಠಲ ದೇವಸ್ಥಾನದ ಸಪ್ತ ಸ್ವರ ಮಂಟಪ, ಉಗ್ರ ನರಸಿಂಹ ಸ್ಮಾರಕ, ಅಂಜನಾದ್ರಿ ಬೆಟ್ಟದ ಮೇಲೆ ಹನುಮಂತ ನಿಂತಿರುವುದನ್ನು ಸ್ತಬ್ಧಚಿತ್ರ ಒಳಗೊಂಡಿರಲಿದೆ. ಇದರ ಜತೆಗೆ ವಿದೇಶಿ ಪ್ರವಾಸಿಗರ ವೇಷಧಾರಿಗಳು, 1509 ರಲ್ಲಿ ಶ್ರೀಕೃಷ್ಣ ದೇವರಾಯನಿಗೆ ನಡೆದ ಪಟ್ಟಾಭಿಷೇಕದ ಅನಾವರಣವನ್ನು ಪ್ರದರ್ಶಿಸಲಾಗಿತ್ತು, ಕತ್ತಿ ಗುರಾಣಿ ಹಿಡಿದ ಮಹಿಳಾ ಯೋಧರ ಜತೆಗೆ ಚಾಮರ ಹಿಡಿದ ಪುರುಷರು ಇದ್ದರು. ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ಮಹಿಳಾ ಯೋಧರಿದ್ದರು ಎಂಬುದನ್ನು ಈ ಮೂಲಕ ವಿಶ್ವಕ್ಕೆ ಸಾರಲಾಯಿತು. ಪ್ರವೀಣ್ ಡಿ ರಾವ್ ಮತ್ತು ತಂಡ ಹಿನ್ನಲೆ ಸಂಗೀತ ನೀಡಿದೆ.